ಇಂದು ಚಾನಲ್ ಗಳಿಗೆ ಬೇಕಾಗಿರುವುದು ಟಿ ಆರ್ ಪಿ. ಅಂದರೆ ಒಂದು ಕಾರ್ಯಕ್ರಮವನ್ನು ಎಷ್ಟು ಮಂದಿ ನೋಡುತ್ತಿದ್ದಾರೆ ಎನ್ನುವ ಕುರಿತ ಮಾಹಿತಿ. ಇದರ ಮಾಹಿತಿಯನ್ನಾಧರಿಸಿ ವಿವಿಧ ಜಾಹೀರಾತುದಾರರ ದಂಡು ಕಾರ್ಯಕ್ರಮ ಅಥವಾ ಚಾನಲ್ ಗೆ ಬರುತ್ತದೆ.
ಹಾಗಿದ್ದರೆ ಈ ಟಿಆರ್ಪಿಯ ಗುಟ್ಟೇನು? ಅದು ಹೇಗೆ ಟಿ ಆರ್ಪಿ ತಿಳಿಯಬಹುದು? ಈ ಪ್ರಶ್ನೆ ಅಂತೂ ಪ್ರತಿಯೊಬ್ಬರ ಮನಸ್ಸನ್ನೂ ಒಮ್ಮೆಯಾದರೂ ಕಾಡಿರದೇ ಇರದು. ಯಾಕಂದರೆ ಟಿವಿ ವಾಹಿನಿಯಲ್ಲಿ ಕೆಲಸ ಮಾಡುವ ಕೆಲ ಮಂದಿಗೂ ಇದರ ಮರ್ಮದ ಅರಿವಿರುವುದಿಲ್ಲ. ನನ್ನನ್ನೂ ಬಹಳ ಮಂದಿ ಕೇಳಿರುವ ಕಾರಣ ಆ ಬಗ್ಗೆ ಸ್ವಲ್ಪ ಬರೆದರೆ ಸಹಾಯಕಾರಿ ಅನಿಸಿತು.
ಮುಂದಿನ ಕಂತಿನಿಂದ ಕಾರ್ಯಕ್ರಮ ಸಂಬಂಧೀ ವಿಶ್ಲೇಷಣೆಗಳನ್ನು ನೋಡುವ ಮೊದಲು ಆ ಕಾರ್ಯಕ್ರಮ ಜನರನ್ನು ತಲುಪಿದೆ ಎಂದು ಚಾನಲ್ನ ಮಂದಿ ತಿಳಿಯುವುದು ಹೇಗೆ ಅನ್ನುವುದಿಲ್ಲಿ ತಿಳಿಯೋಣ. ಒಂದು ಶೋ ತಯಾರಾಗಿ ಅದು ಮನೆ ಮನೆಗೆ ತಲುಪಿದರೆ ಮಾತ್ರವೇ ಅದನ್ನು ತಯಾರಿಸಲು ಖಚರ್ು ಮಾಡಿದ ಚಾನಲ್ ಅಥವಾ ಪ್ರೊಡಕ್ಷನ್ ಹೌಸ್ನ ಮಂದಿ ನೆಮ್ಮದಿಯಿಂದ ಬದುಕಲು ಸಾಧ್ಯ.
ಕರ್ನಾಟಕದ ಸುದ್ದಿಯಷ್ಟೇ ಹೇಳುವುದಾದರೆ, ಬೆಂಗಳೂರು ಹೊರತುಪಡಿಸಿ ಮಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮುಂತಾದ ನಗರಗಳಲ್ಲಿ ಆಯ್ಕೆ ಮಾಡಿದ ಮನೆಗಳಲ್ಲಿ ಟಿಆರ್ಪಿ ಅಳೆಯುವ ಮಾಪಕಗಳನ್ನಿಡುತ್ತಾರೆ. ಇವುಗಳನ್ನು ಇನ್ಟ್ಯಾಮ್ ಅಂದರೆ ಇಂಡಿಯನ್ ಟೆಲೆವಿಜನ್ ಆಡಿಯೆನ್ಸ್ ಮೆಜರ್ಮೆಂಟ್ ಏಜೆನ್ಸಿ ಅಲ್ಲಿ ಅಳವಡಿಸಿರುತ್ತದೆ. ಈ ಮಾಪಕಗಳು ಚಾನಲ್ಗಳನ್ನು ಕಳುಹಿಸಿರುವ ಫ್ರೀಕ್ವೆನ್ಸಿಯನ್ನು ಲೆಕ್ಕ ಹಾಕುತ್ತವೆ ಮತ್ತು ಆ ಮನೆಗಳಲ್ಲಿ ಯಾವ ಫ್ರೀಕ್ವೆನ್ಸಿಯ ಚಾನಲ್ಗಳನ್ನು ವೀಕ್ಷಿಸಲಾಗುತ್ತದೆ ಅನ್ನುವ ಮಾಹಿತಿಯನ್ನು ಇದರಲ್ಲಿ ಕಲೆಹಾಕಲಾಗುತ್ತದೆ. ಆ ಮಾಹಿತಿಯನ್ನು ಪ್ರತಿ ಕ್ಷಣವೂ ಈ ಮಾಪಕ ದಾಖಲಿಸುತ್ತಿರುತ್ತದೆ. ಈ ದಾಖಲೆಯನ್ನು ಆಧರಿಸಿ ಪ್ರತಿ ವಾರಕ್ಕೊಮ್ಮೆಯಂತೆ ಇನ್ಟ್ಯಾಮ್ನ ಮಂದಿ ಚಾನಲ್ನ ಹೆಸರಿನ ಜೊತೆ ತಾಳೆ ಹಾಕುತ್ತಾರೆ ಮತ್ತು ಅವುಗಳ ಪ್ರಕಾರ ಯಾವ ಚಾನಲ್ನ ಯಾವ ಕಾರ್ಯಕ್ರಮ ಎಷ್ಟು ಹೊತ್ತು ವೀಕ್ಷಿಸಲ್ಪಟ್ಟಿದೆ ಅನ್ನುವುದು ತಿಳಿಯುತ್ತದೆ.
ಕಾರ್ಯಕ್ರಮಗಳು ಹೆಚ್ಚಾಗಿ ಅರ್ಧ ಗಂಟೆ ಅಥವಾ ಒಂದು ಗಂಟೆಯದಾಗಿರುತ್ತವೆ. ಅದನ್ನಾಧರಿಸಿ ಕಾರ್ಯಕ್ರಮದ ಟಿಆರ್ಪಿಯನ್ನು ಪಟ್ಟಿ ಮಾಡು ಅವುಗಳನ್ನು ಚಂದಾದಾರರಿಗೆ (ಟಿ ವಿ ಚಾನಲ್ಗಳು, ಜಾಹೀರಾತು ಏಜೆನ್ಸಿಗಳು, ಕಾರ್ಯಕ್ರಮ ವಿಶ್ಲೇಷಕರು) ಕಳುಹಿಸಿಕೊಡಲಾಗುತ್ತದೆ.
ಈ ವ್ಯವಸ್ಥೆ ಎಷ್ಟರಮಟ್ಟಿಗೆ ಸರಿ ಹಾಗೂ ವೈಜ್ಞಾನಿಕ ಅನ್ನುವ ಬಗ್ಗೆ ಯಾವತ್ತೂ ಪ್ರಶ್ನೆ ಇದ್ದೇ ಇದೆ. ಯಾಕಂದರೆ ಇಲ್ಲಿನ ಮಾಪಕಗಳನ್ನು ಎಲ್ಲಾ ವೀಕ್ಷಕರ ಮನೆಯಲ್ಲೂ ಅಳವಡಿಸುವುದು ಅಸಾಧ್ಯ, ಯಾಕಂದರೆ ಇವು ಬಹಳ ದುಬಾರಿ. ಇನ್ನೊಂದು ಹಾಗೆ ಮಾಡುವುದು ಸುಲಭದ ವಿಚಾರವೂ ಅಲ್ಲ. ಹಾಗೆಂದೇ ಕೇವಲ ಕೆಲವು ಸಾವಿರ ಮನೆಗಳ ವೀಕ್ಷಕರ ಪ್ರವೃತ್ತಿಯನ್ನಾಧರಿಸಿ ಇಡೀ ರಾಜ್ಯ ಅಥವಾ ದೇಶದ ವೀಕ್ಷಕರ ಪ್ರವೃತ್ತಿಯನ್ನಳೆಯುವುದು ಎಷ್ಟು ಸಮಂಜಸ ಅನ್ನುವವರೂ ಇದ್ದಾರೆ. ಆದರೆ ಜಾಹೀರಾತು ಕಂಪನಿಗಳು ಹೆಚ್ಚಾಗಿ ಎದನ್ನೇ ಅವಲಂಬಿಸಿರುವ ಕಾರಣ ಟಿ ವಿ ಚಾನಲ್ಗಳ ಮಂದಿ ಇದರ ಕುರಿತು ಹೆಚ್ಚು ಗಮನ ಕೊಡುತ್ತಾರೆ. ಇದಲ್ಲದೇ ಬೇರಿನ್ಯಾವ ರೀತಿಯಲ್ಲೂ ವೀಕ್ಷಕರ ಪ್ರವೃತ್ತಿಯನ್ನರಿಯುವುದು ಸಾಧ್ಯವಿಲ್ಲದಿರುವ ಕಾರಣವೂ ಇದು ಇನ್ನೂ ಚಾಲ್ತಿಯಲ್ಲಿದೆ.
ಆದರೆ ಡಿಟಿಎಚ್ನಲ್ಲಿ ವೀಕ್ಷಕರ ಮೇಲೆ ಚಾನಲ್ ಅಥವಾ ಡಿಟಿಎಚ್ನ ಮಂದಿಗೆ ಹೆಚ್ಚು ಹಿಡಿತ ಇರುವುದರಿಂದ ಯಾವ ಚಾನಲ್ ಅನ್ನು ಎಷ್ಟು ಹೊತ್ತು ವೀಕ್ಷಿಸಲಾಗುತ್ತಿದೆ ಅನ್ನುವುದನ್ನು ಅಳೆಯಬಹುದಾಗಿದೆ ಅನ್ನುವ ಮಾತಿದ್ದರೂ ಡಿಟಿಎಚ್ ಕೂಡ ಎಲ್ಲಾ ಮನೆಗಳಲ್ಲಿ ಲಭ್ಯ ಇಲ್ಲದಿರುವ ಕಾರಣ ಅದೂ ಕೂಡ ಪ್ರತಿಯೊಬ್ಬರ ಪ್ರವೃತ್ತಿಯನ್ನು ಹೇಳುವುದಿಲ್ಲ ಅನ್ನುವುದೂ ಸತ್ಯ. ಆದರೂ ಮುಂದಿನ ದಿನಗಳಲ್ಲಿ ಇಂಟರ್ನೆಟ್ ಟಿವಿಗಳು ಹೆಚ್ಚುಹೆಚ್ಚು ಬರುವುದು ಸಾದ್ಯವಿದೆ ಅಮೆರಿಕದಂತಹ ದೇಶಗಳಲ್ಲಿ ಇದು ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಹಾಗಾಗಿ ಅದರ ಮೂಲಕ ವೀಕ್ಷಕರ ಮಾಪನವಾಗುವುದು ಸುಲಭವಾಗಲಿದೆ.
ಒಂದು ಕಾರ್ಯಕ್ರಮದ ಕುರಿತು ಈ ಟಿಆರ್ಪಿಯ ಮೂಲಕ ಅದನ್ನು ನೋಡುತ್ತಿರುವ ಮಂದಿ ಸಮಾಜದಲ್ಲಿ ಯಾವ ಸ್ತರದಲ್ಲಿದ್ದಾರೆ ಅನ್ನುವುದನ್ನು ಅಳೆಯಲಾಗುತ್ತದೆ. ಒಂದು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಅದೇ ಚಾನಲ್ ಅನ್ನು ಎಷ್ಟು ಮಂದಿ ನೋಡಿದರು ಅನ್ನುವುದು ಕೂಡ ತಿಳಿಯುತ್ತದೆ. (ಟೈಂ ಸ್ಪೆಂಟ್) ಈ ಮೂಲಕ ಆ ಕಾರ್ಯಕ್ರಮದ ಯಾವ ಭಾಗ ಜನರಿಗೆ ಹೆಚ್ಚು ಇಷ್ಟವಾಗಿದೆ, ಯಾವ ಪಾತ್ರ ಯಾವ ಸಂದರ್ಭದಲ್ಲಿ ಬಂದಾಗ ಆ ಧಾರಾವಾಹಿಗೆ ಹೆಚ್ಚು ಮೆಚ್ಚುಗೆಯಾಗಿದೆ ಅನ್ನುವದಕ್ಕೆ ಅನುಗುಣವಾಗಿ ಕಾರ್ಯಕ್ರಮ ಅಥವಾ ಧಾರಾವಾಹಿಯ ರೂಪರೇಷೆಗಳನ್ನು ಬದಲಾಯಿಸಲಾಗುತ್ತದೆ ಅಥವಾ ಮುಂದುವರಿಸಲಾಗುತ್ತದೆ.
ಒಟ್ಟಿನಲ್ಲಿ ವೀಕ್ಷಕನಿಗೆ ಉತ್ತಮ ಮನರಂಜನೆಯನ್ನು ಉಣಬಡಿಸಿ ತಮ್ಮ ಬ್ಯಾಂಕ್ ಖಾತೆಗಳನ್ನು ತುಂಬಿಸುವ ಚಾನಲ್ ಮತ್ತು ಕಾರ್ಯಕ್ರಮ ನಿಮರ್ಾಪಕರ ದಂಡು ದಿನೇ ದಿನೇ ಹೆಚ್ಚುತ್ತಾ ಇದೆ. ಯಾಕಂದರೆ ಭಾರತದಲ್ಲಿ ಈಗಾಗಲೇ 500ರಷ್ಟು ಚಾನಲ್ಗಳಿದ್ದರೂ ಇನ್ನಷ್ಟು ಜಾಹೀರಾತುದಾರರಿಗೆ ಅವಕಾಶವಿದೆ. ವಾರ್ಷಿಕ 30 ಸಾವಿರ ಕೋಟಿಯಷ್ಟು ಜಾಹೀರಾತಿನ ಮೂಲಕ ಆದಾಯ ಬರುತ್ತಿದ್ದರೂ ಇನ್ನಷ್ಟು ಬೆಳವಣಿಗೆಗೆ ಅವಕಾಶ ಇರುವ ಕಾರಣ ಈ ಚಾನಲ್ಗಳಿಂದ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಲೇ ಇದೆ.
ಹೀಗೆ ಹಲವು ಸ್ತರಗಳಲ್ಲಿ ಈ ವಿಶ್ಲೇಷಣೆಗಳನ್ನು ಮಾಡಿ ಅದಕ್ಕೆ ತಕ್ಕದಾದ ಕಾರ್ಯಕ್ರಮಗಳನ್ನು ಮಾಡುವಲ್ಲಿ ನಮ್ಮ ಕನ್ನಡದ ಚಾನಲ್ಗಳೂ ಹಿಂದಿಲ್ಲ. ಅವುಗಳ ಕುರಿತೂ ಮುಂದಿನ ವಾರಗಳಲ್ಲಿ ತಿಳಿಯೋಣ. ಜೊತೆಗೆ ಕನ್ನಡದಲ್ಲಿ ಯಾವ ಕಾರ್ಯಕ್ರಮ ಹೆಚ್ಚು ವೀಕ್ಷಕರನ್ನು ಗಳಿಸಿದೆ, ಯಾವ ಚಾನಲ್ ಅತಿ ಹೆಚ್ಚು ವೀಕ್ಷಕರ ಬೆಂಬಲ ಹೊಂದಿದೆ ಅನ್ನುವ ಕುತೂಹಲಕ್ಕೂ ಬ್ರೇಕ್ ಬೀಳಲಿದೆ, ಮುಂದಿನ ವಾರ.
ಬಡೆಕ್ಕಿಲ ಪ್ರದೀಪ




